ಜಗತ್ತು ಸೃಷ್ಟಿಯಾಗುವುದಕ್ಕಿಂತ ಮೊದಲೇ ವಾಕ್ಯ [*ವಾಕ್ಯ ಇಲ್ಲಿ ಇದರರ್ಥ ಕ್ರಿಸ್ತನು.] ಎಂಬಾತನಿದ್ದನು. ಆ ವಾಕ್ಯ ಎಂಬಾತನು ದೇವರೊಂದಿಗೆ ಇದ್ದನು. ಆ ವಾಕ್ಯ ಎಂಬಾತನೇ ಸ್ವತಃ ದೇವರಾಗಿದ್ದನು.
ವಾಕ್ಯ ಎಂಬಾತನು ಮನುಷ್ಯನಾಗಿ ನಮ್ಮೊಂದಿಗೆ ವಾಸಿಸಿದನು. ನಾವು ಆತನ ಮಹಿಮೆಯನ್ನು ನೋಡಿದೆವು. ಆ ಮಹಿಮೆಯು ತಂದೆಯ ಒಬ್ಬನೇ ಮಗನಿಗಿರುವ ಮಹಿಮೆಯಾಗಿತ್ತು. ಆತನು ಕೃಪೆಯಿಂದಲೂ ಸತ್ಯದಿಂದಲೂ ತುಂಬಿದವನಾಗಿದ್ದನು.
ಯೋಹಾನನು ಆತನ ಬಗ್ಗೆ ಜನರಿಗೆ ತಿಳಿಸುತ್ತಾ, “ ‘ನನ್ನ ನಂತರ ಬರುವ ಒಬ್ಬನು ನನಗಿಂತಲೂ ಶ್ರೇಷ್ಠನಾಗಿದ್ದಾನೆ. ಆತನು ನನಗಿಂತ ಮೊದಲೇ ಜೀವಿಸುತ್ತಿದ್ದನು’ ಎಂದು ನಾನು ಹೇಳಿದಾಗ ಈತನ ಬಗ್ಗೆಯೇ ಮಾತಾಡುತ್ತಿದ್ದೆನು” ಎಂದು ಗಟ್ಟಿಯಾಗಿ ಕೂಗಿ ಹೇಳಿದನು.
ಯೆಹೂದ್ಯರು ಯೋಹಾನನಿಗೆ, “ಹಾಗಾದರೆ ನೀನು ಯಾರು? ನೀನು ಎಲೀಯನೋ?” [‡ಎಲೀಯ ಕ್ರಿ. ಪೂ. 850ರಲ್ಲಿ ಜೀವಿಸಿದ್ದ ಪ್ರವಾದಿ.] ಎಂದು ಕೇಳಿದರು. ಅವನು, “ಇಲ್ಲ, ನಾನು ಎಲೀಯನಲ್ಲ” ಎಂದು ಉತ್ತರಿಸಿದನು. ಯೆಹೂದ್ಯರು, “ನೀನು ಪ್ರವಾದಿಯೋ?” ಎಂದು ಕೇಳಿದರು. ಯೋಹಾನನು, “ಇಲ್ಲ, ನಾನು ಪ್ರವಾದಿಯಲ್ಲ” ಎಂದು ಉತ್ತರಕೊಟ್ಟನು.
ಅದಕ್ಕೆ ಯೋಹಾನನು, “ ‘ಪ್ರಭುವಿಗಾಗಿ ನೇರವಾದ ದಾರಿಯನ್ನು ಸಿದ್ಧಗೊಳಿಸಿರಿ’ ಎಂದು ಅಡವಿಯಲ್ಲಿ ಕೂಗುವವನ ಸ್ವರವೇ ನಾನು” ಯೆಶಾಯ 40:3] ಎಂದು ಪ್ರವಾದಿಯಾದ ಯೆಶಾಯನ ಮಾತುಗಳಲ್ಲೇ ಉತ್ತರಕೊಟ್ಟನು.
ಅವರು ಅವನಿಗೆ, “ನೀನು ನಿನ್ನ ಬಗ್ಗೆ, ‘ನಾನು ಕ್ರಿಸ್ತನೂ ಅಲ್ಲ, ಎಲೀಯನೂ ಅಲ್ಲ, ಪ್ರವಾದಿಯೂ ಅಲ್ಲ’ ಎಂದು ಹೇಳುತ್ತಿರುವೆ. ಹಾಗಾದರೆ ನೀನು ಜನರಿಗೆ ಏಕೆ ದೀಕ್ಷಾಸ್ನಾನ ಮಾಡಿಸುವೆ?” ಎಂದು ಕೇಳಿದರು.
‘ನನ್ನ ನಂತರ ಒಬ್ಬ ವ್ಯಕ್ತಿಯು ಬರುವನು. ಆತನು ನನಗಿಂತಲೂ ದೊಡ್ಡವನು. ಏಕೆಂದರೆ ಆತನು ನನಗಿಂತಲೂ ಮೊದಲೇ ಇದ್ದವನು ಮತ್ತು ಯಾವಾಗಲೂ ಇದ್ದವನು’ ಎಂದು ನಾನು ಹೇಳುತ್ತಿದ್ದುದು ಈತನ ವಿಷಯವಾಗಿಯೇ.
(32-33) ಇದಲ್ಲದೆ ಯೋಹಾನನು ಸಾಕ್ಷಿಕೊಟ್ಟು ಹೇಳಿದ್ದೇನೆಂದರೆ, “ಆತನು ಯಾರೆಂದು ನನಗೂ ಗೊತ್ತಿರಲಿಲ್ಲ. ಆದರೆ ಜನರಿಗೆ ದೀಕ್ಷಾಸ್ನಾನ ಕೊಡಲು ನನ್ನನ್ನು ಕಳುಹಿಸಿದಾತನು ನನಗೆ, ‘ಪವಿತ್ರಾತ್ಮನು ಇಳಿದುಬಂದು ಒಬ್ಬ ವ್ಯಕ್ತಿಯ ಮೇಲೆ ನೆಲಸುವುದನ್ನು ನೀನು ನೋಡುವೆ. ಪವಿತ್ರಾತ್ಮನಿಂದ ದೀಕ್ಷಾಸ್ನಾನ ಕೊಡುವವನು ಆ ವ್ಯಕ್ತಿಯೇ’ ಎಂದು ಹೇಳಿದ್ದನು. ಇದು ನೆರವೇರುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಪವಿತ್ರಾತ್ಮನು ಪರಲೋಕದಿಂದ ಪಾರಿವಾಳದ ರೂಪದಲ್ಲಿ ಇಳಿದುಬಂದು ಆತನ (ಯೇಸುವಿನ) ಮೇಲೆ ನೆಲಸುವುದನ್ನು ನಾನು ನೋಡಿದೆನು.
ಯೇಸು, “ನನ್ನೊಂದಿಗೆ ಬನ್ನಿ, ಆಗ ನೀವೇ ನೋಡುವಿರಿ” ಎಂದು ಹೇಳಿದನು. ಆದ್ದರಿಂದ ಆ ಇಬ್ಬರು ಹೋಗಿ ಯೇಸು ಇಳಿದುಕೊಂಡಿದ್ದ ಸ್ಥಳವನ್ನು ನೋಡಿದರು. ಆ ದಿನ ಅವರು ಅಲ್ಲಿಯೇ ಆತನೊಂದಿಗೆ ಇದ್ದರು. ಆಗ ಸಾಯಂಕಾಲ ಸುಮಾರು ನಾಲ್ಕು ಗಂಟೆಯಾಗಿತ್ತು.
ಅವನು ಸೀಮೋನನನ್ನು ಯೇಸುವಿನ ಬಳಿಗೆ ಕರೆದುಕೊಂಡು ಬಂದನು. ಯೇಸು ಸೀಮೋನನ ಕಡೆಗೆ ನೋಡಿ, “ಯೋಹಾನನ ಮಗನಾದ ನಿನ್ನ ಹೆಸರು ಸೀಮೋನ. ನೀನು ಕೇಫನೆಂದು ಕರೆಸಿಕೊಳ್ಳುವೆ” ಎಂದು ಹೇಳಿದನು. (“ಕೇಫ” ಅಂದರೆ “ಪೇತ್ರ” ಎಂದರ್ಥ).
ಫಿಲಿಪ್ಪನು ನತಾನಿಯೇಲನನ್ನು ಕಂಡು ಅವನಿಗೆ, “ಯಾವನ ವಿಷಯದಲ್ಲಿ ಮೋಶೆಯು ಧರ್ಮಶಾಸ್ತ್ರದಲ್ಲಿ ಬರೆದನೋ ಮತ್ತು ಪ್ರವಾದಿಗಳು ಬರೆದರೋ, ಆತನನ್ನು ನಾವು ಕಂಡುಕೊಂಡೆವು. ಆತನ ಹೆಸರು ಯೇಸು. ಆತನು ಯೋಸೇಫನ ಮಗನು. ಆತನು ನಜರೇತಿನವನು” ಎಂದು ಹೇಳಿದನು.
ನತಾನಿಯೇಲನು, “ನೀನು ನನ್ನನ್ನು ಹೇಗೆ ಬಲ್ಲೆ?” ಎಂದು ಕೇಳಿದನು. ಯೇಸು, “ಫಿಲಿಪ್ಪನು ನನ್ನ ಬಗ್ಗೆ ನಿನಗೆ ತಿಳಿಸುವುದಕ್ಕಿಂತ ಮೊದಲೇ ನೀನು ಅಂಜೂರದ ಮರದ ಕೆಳಗಿದ್ದಾಗ ನಾನು ನಿನ್ನನ್ನು ನೋಡಿದೆನು” ಎಂದು ಹೇಳಿದನು.
ಯೇಸು ನತಾನಿಯೇಲನಿಗೆ, “ನಿನ್ನನ್ನು ಅಂಜೂರದ ಮರದ ಕೆಳಗೆ ನೋಡಿದೆನೆಂದು ನಾನು ನಿನಗೆ ಹೇಳಿದ್ದರಿಂದ ನೀನು ನನ್ನನ್ನು ನಂಬುವೆ. ಆದರೆ ಅದಕ್ಕಿಂತಲೂ ಹೆಚ್ಚು ದೊಡ್ಡ ಕಾರ್ಯಗಳನ್ನು ನೀನು ನೋಡುವೆ!” ಎಂದು ಹೇಳಿದನು.
ಅದಲ್ಲದೆ ಯೇಸು, “ನಾನು ನಿನಗೆ ಸತ್ಯವನ್ನು ಹೇಳುತ್ತೇನೆ. ಪರಲೋಕವು ತೆರೆದಿರುವುದನ್ನೂ ಮನುಷ್ಯಕುಮಾರನ ಮೇಲೆ ದೇವದೂತರುಗಳು ಏರಿಹೋಗುವುದನ್ನೂ ಕೆಳಗೆ ಇಳಿದುಬರುವುದನ್ನೂ ನೀವು ನೋಡುವಿರಿ” ಎಂದು ಹೇಳಿದನು.